ಗುಡ್ಡೆಅಂಗಡಿ ಉರೂಸ್ ಸಮಾರೋಪ..... ಇಂದು ಮಧ್ಯಾಹ್ನ ಅನ್ನದಾನದೊಂದಿಗೆ ಸಂಪನ್ನ......
ಬಂಟ್ವಾಳ (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಮಿನಲ್ಲಿ ದಾನ-ಧರ್ಮಗಳಿಗೆ ವಿಶೇಷ ಸ್ಥಾನಮಾನಗಳನ್ನು ಕಲ್ಪಿಸಲಾಗಿದ್ದು, ದಾನ-ಧರ್ಮಗಳಿಗೆ ಮಹತ್ತರ ಪ್ರತಿಫಲದ ಭರವಸೆ ನೀಡಲಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ದಾನ-ಧರ್ಮಗಳು ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್ ಮಾಡಲು ಮಹತ್ವ ಪಡೆದುಕೊಳ್ಳುತ್ತಿರುವುದು ಅತ್ಯಂತ ದುಃಖದ ವಿಚಾರವಾಗಿದೆ ಎಂದು ಪುತ್ತೂರು-ಕಲ್ಲೆಗ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಕ್ ಜಲಾಲಿ ತೀವ್ರ ಕಳವಳ ವ್ಯಕ್ತಪಡಿಸಿದರು.
ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಶೈಖ್ ಮೌಲವಿ (ನ.ಮ) ಅವರ ಹೆಸರಿನಲ್ಲಿ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ 40ನೇ ವರ್ಷದ ಉದಯಾಸ್ತಮಾನ ಉರೂಸ್ ಕಾರ್ಯಕ್ರಮದ ಪ್ರಯುಕ್ತ ಶನಿವಾರ ರಾತ್ರಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಗೈದ ಅವರು ದಾನ-ಧರ್ಮಗಳು ಅಲ್ಲಾಹನು ವ್ಯಕ್ತಿಗೆ ನೀಡಿದ ಸಂಪತ್ತಿನ ಭಾಗವನ್ನು ಬಡವರಿಗೆ ನೀಡುವ ನ್ಯಾಯೋಚಿತ ಹಕ್ಕಾಗಿದ್ದು, ಅದನ್ನು ಧನಿಕ ತನ್ನ ಉದಾರತೆ ಎಂಬ ಅಹಂಕಾರದಿಂದ ತಾನು ಬಡ-ಬಗ್ಗರಿಗೆ ನೀಡಿದ್ದನ್ನು ಬಹಿರಂಗವಾಗಿ ಫೋಟೋ ಶೇರ್ ಮಾಡುವ ಮೂಲಕ ಬಡವರನ್ನು ಅವಮಾನಿಸಿದಂತೆ. ಬಡವರ, ದೀನ-ದಲಿತರ ಅವಮಾನ ಮಾಡುವುದು ನೀಡಿದ ದಾನದ ಪ್ರತಿಫಲಕ್ಕೆ ಕುಂದು ಉಂಟುಮಾಡುವುದರ ಜೊತೆಗೆ ಪರಲೋಕದಲ್ಲಿ ಭಗವಂತನ ಘನ ಘೋರ ದ್ವೇಷಕ್ಕೂ ಕಾರಣವಾದೀತು ಎಂದು ಎಚ್ಚರಿಸಿದರು.
ಕೇರಳ-ಕಣ್ಣೂರಿನ ಸಯ್ಯಿದ್ ಮುಹಮ್ಮದ್ ಸಫ್ವಾನ್ ತಂಙಳ್ ಅಲ್-ಬುಖಾರಿ ದುವಾಶಿರ್ವಚನಗೈದರು. ಮಸೀದಿ ಅಧ್ಯಕ್ಷ ಎಸ್ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ. ರಮಾನಾಥ ರೈ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಮೊದಲಾದವರು ಭಾಗವಹಿಸಿದ್ದರು.
ಸ್ಥಳೀಯ ಖತೀಬ್ ಹಂಝ ಫೈಝಿ ತೊಕ್ಕೊಟ್ಟು ಸ್ವಾಗತಿಸಿ, ಮದ್ರಸ ಕನ್ಸ್ಟ್ರಕ್ಷನ್ ಕಮಿಟಿ ಚೆಯರ್‍ಮೆನ್ ಹಾಜಿ ಮುಹಮ್ಮದ್ ನೀಮಾ ಪ್ರಸ್ತಾವನೆಗೈದರು. ಮಸೀದಿ ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಫೆ 16 ರಂದು (ಇಂದು) ಸುಬಹಿ ನಮಾಝ್ ಬಳಿಕ ಎ ಎ ಇಬ್ರಾಹಿಂ ಮುಸ್ಲಿಯಾರ್ ಬೋಗೋಡಿ ನೇತೃತ್ವದಲ್ಲಿ ಖತಮುಲ್ ಕುರ್‍ಆನ್ ಪಾರಾಯಣ. ಲುಹ್‍ರ್ ನಮಾಝ್ ಬಳಿಕ ಸಯ್ಯಿದ್ ಹುಸೈನ್ ಬಾಅಲವಿ ತಂಙಳ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಬಳಿಕ ಸಾರ್ವಜನಿಕ ಅನ್ನದಾನದ ಮೂಲಕ ಉರೂಸ್ ಕಾರ್ಯಕ್ರಮ ಸಮಾಪನಗೊಳ್ಳಲಿದೆ.
0 comments:
Post a Comment