ಬಂಟ್ವಾಳ (ಕರಾವಳಿ ಟೈಮ್ಸ್) : ಮಂಗಳೂರು-ಚಿಕ್ಕಮಗಳೂರು ನಡುವಿನ ಸಂಚಾರದ ಸರಕಾರಿ ಬಸ್ಸಿನಲ್ಲಿ ಮೂಡಿಗೆರೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಸಂದರ್ಭ ಬಿ ಸಿ ರೋಡು ತಲುಪುವ ವೇಳೆ ಆಕಸ್ಮಿಕವಾಗಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಸಫಲರಾಗಿದ್ದು, ಮೃತರನ್ನು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಲಶ್ಶೇರಿ ತಾಲೂಕಿನ ಪಿಲಾಕುಳ ಗ್ರಾಮದ ನಿವಾಸಿ ಅಬ್ದುಲ್ ಅಝೀಝ್ (53) ಎಂದು ಹೆಸರಿಸಲಾಗಿದೆ.
ಇವರು ಬುಧವಾರ ಮಂಗಳೂರಿನಿಂದ ಹೊಸದುರ್ಗಕ್ಕೆ ತೆರಳುತ್ತಿದ್ದ ಕೆಎ 19 ಎಫ್ 3184 ನೋಂದಣಿ ಸಂಖ್ಯೆಯ ಸರಕಾರಿ ಬಸ್ಸಿನಲ್ಲಿ ಮೂಡಿಗೆರೆಗೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಸಂದರ್ಭ ಬಿ ಸಿ ರೋಡು ತಲುಪುತ್ತಿದ್ದಂತೆ ಆಕಸ್ಮಿಕವಾಗಿ ಮೃತಪಟ್ಟಿದ್ದರು.
ಮಗನ ಮನೆಗೆ ತೆರಳಲು ಹೊರಟಿದ್ದ ಇವರು ಇದ್ದಕ್ಕಿದ್ದಂತೆ ರಕ್ತ ವಾಂತಿ ಮಾಡಲು ಆರಂಭಿಸಿ ಬಳಿಕ ತೀವ್ರ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಈ ಸಂದರ್ಭ ಇವರನ್ನು 108 ಅಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದರು.
ಬಳಿಕ ಮೃತರ ವಾರೀಸುದಾರರನ್ನು ಸಂಪರ್ಕಿಸುವಲ್ಲಿ ಪೊಲೀಸರು ಸಫಲರಾಗಿದ್ದು, ಬಂಟ್ವಾಳ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.
0 comments:
Post a Comment