![]() |
ಬಸ್ಸಿನಲ್ಲಿ ಮೃತಪಟ್ಟ ವ್ಯಕ್ತಿಯ ಮೃತದೇಹ |
ಬಂಟ್ವಾಳ (ಕರಾವಳಿ ಟೈಮ್ಸ್) : ಮಂಗಳೂರು-ಚಿಕ್ಕಮಗಳೂರು ನಡುವಿನ ಸಂಚಾರದ ಸರಕಾರಿ ಬಸ್ಸಿನಲ್ಲಿ ಮೂಡಿಗೆರೆ ಟಿಕೆಟ್ ಪಡೆದು ಪ್ರಯಾಣಿಸುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಬಸ್ಸು ಬಿ ಸಿ ರೋಡು ತಲುಪಿದ್ದಂತೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮಂಗಳೂರಿನಿಂದ ಹೊಸದುರ್ಗಕ್ಕೆ ತೆರಳುತ್ತಿದ್ದ ಕೆಎ 19 ಎಫ್ 3184 ನೋಂದಣಿ ಸಂಖ್ಯೆಯ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 45-50 ವರ್ಷದ ಈ ಅಪರಿಚಿತ ವ್ಯಕ್ತಿ ಮಂಗಳೂರಿನಿಂದ ಮೂಡಿಗೆರೆಗೆ ಟಿಕೆಟ್ ಪಡೆದುಕೊಂಡು ಪ್ರಯಾಣ ಬೆಳೆಸಿದ್ದ. ಬಸ್ಸು ಬಿ ಸಿ ರೋಡು ತಲುಪಿದ ಸಂದರ್ಭ ಈತ ಮೃತಪಟ್ಟಿರುವುದು ಗೊತ್ತಾಗಿದೆ. ತಕ್ಷಣ ಬಸ್ಸು ಚಾಲಕ-ನಿರ್ವಾಹಕರು ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದ್ದು, ಪೊಲೀಸರು ವ್ಯಕ್ತಿಯ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
ಈತ ಯಾವ ಕಾರಣದಿಂದ ಮೃತಪಟ್ಟಿದ್ದಾನೆ ಎಂಬುದು ತಿಳಿದು ಬಂದಿಲ್ಲ. ಮೃತ ವ್ಯಕ್ತಿಯ ಉದರದ ಮೇಲೆ ಎರಡು ಆಪರೇಷನ್ ಆಗಿರುವ ಗುರುತು ಇರುತ್ತದೆ ಎಂದು ಪೊಲೀಸರು ತಿಳಿಸಿದ್ದು, ಈತನ ಮಾಹಿತಿಗಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.
0 comments:
Post a Comment