ಬೆಂಗಳೂರು, ಜುಲೈ 25, 2021 (ಕರಾವಳಿ ಟೈಮ್ಸ್) : ರಾಜ್ಯದಲ್ಲಿ ಕೋವಿಡ್ ಸೋಂಕು ಮೊದಲ ಅಲೆ ಒಂದಷ್ಟು ನಿಯಂತ್ರಣಕ್ಕೆ ಬರುತ್ತಲೇ ಸರಕಾರ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸಂಪೂರ್ಣ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿ ಪ್ರದರ್ಶಿಸಿ ಎಲ್ಲವನ್ನೂ ಜನರ ಸ್ವಯಂ ವಿವೇಚನೆಗೆ ಬಿಟ್ಟ ಪರಿಣಾಮ ಲಾಕ್ ಡೌನ್ ಇಲ್ಲ, ಕರ್ಫ್ಯೂ ಇಲ್ಲವೇ ಇಲ್ಲ ಎಂಬ ಜಪ ಜಪಿಸುತ್ತಲೇ ಕೋವಿಡ್ 2ನೇ ಅಲೆ ಸದ್ದಿಲ್ಲದೆ ಬೀಸಿದ ಪರಿಣಾಮ ಸರಕಾರ ಏಕಾಏಕಿ ಎರಡನೇ ಬಾರಿಗೆ ಪೂರ್ಣ ಲಾಕ್ ಡೌನ್ ಘೋಷಿತು.
ಇದೀಗ ಎರಡನೇ ಅಲೆ ಕೊಂಚ ಇಳಿಮುಖ ಆಗುತ್ತಲೆ ಸರಕಾರ ಲಾಕ್ ಡೌನ್ ನಿರ್ಬಂಧಗಳನ್ನು ತೆರವುಗೊಳಿಸಿ ಮತ್ತೆ ನಿರ್ಬಂಧ ಕ್ರಮಗಳ ಪಾಲನೆ ಜನರ ವಿವೇಚನೆಗೆ ಬಿಟ್ಟಾಕಿದೆ. ಆದರೆ ಜನ ಸರಕಾರದ ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಸಂಪೂರ್ಣ ನಿರ್ಲಕ್ಷತಾಭಾವ ಪ್ರದರ್ಶಿಸುತ್ತಿದ್ದು ಮತ್ತೆ ಆತಂಕ ಆರಂಭಗೊಳ್ಳುವಂತೆ ಮಾಡಿದೆ.
ಸರಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಇದೀಗ ಮತ್ತೆ ಮೌನವಾಗಿರುವ ಪರಿಣಾಮ ಜನ ಮೋಜು-ಮಸ್ತಿ ಹೆಸರಿನಲ್ಲಿ ಕೊರೋನಾ ಮಾರ್ಗಸೂಚಿಗೆ ಸಂಪೂರ್ಣ ಬೆನ್ನು ಹಾಕುತ್ತಿರುವ ದೃಶ್ಯ ಕಂಡು ಬರುತ್ತಿದೆ. ಯುವಕರು ಗುಂಪು ಗುಂಪಾಗಿ ಮೋಜು ಮಸ್ತಿಯ ಹೆಸರಿನಲ್ಲಿ ಘಾಟಿ ಪ್ರದೇಶಗಳಿಗೆ ತೆರಳಿ ಕುಣಿದು ಕುಪ್ಪಳಿಸುತ್ತಾ ಯಾವುದೇ ಸಾಮಾಜಿಕ ಅಂತರ, ಮಾಸ್ಕ್ ಧಾರಣೆ ಇಲ್ಲದೆ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪ್ರಕೃತಿಗೇ ಸವಾಲೆಸೆಯುವ ರೀತಿಯಲ್ಲಿ ಕಠಿಣ ಪರೀಕ್ಷೆಗೆ ಒಡ್ಡಿದ ಭಗವಂತನ ಅಸ್ತಿತ್ವವನ್ನೇ ಪ್ರಶ್ನಿಸುವ ರೀತಿಯ ಆಡಂಬರಗಳು ಕಂಡುಬರುತ್ತಿದೆ. ಅಲ್ಲದೆ ಮದುವೆ ಸಹಿತ ಶುಭ ಸಮಾರಂಭಗಳು ಜನ ಸಂಖ್ಯೆಯ ಇತಿ-ಮಿತಿಗಳನ್ನು ಮೀರಿ ಸಭಾಂಗಣಗಳು ತುಂಬಿ ತುಳುಕುವ ರೀತಿಯಲ್ಲಿ ಸರಕಾರದ ಎಲ್ಲ ಮಾರ್ಗಸೂಚಿ ಉಪಕ್ರಮಗಳನ್ನು ಮೆಟ್ಟಿ ನಿಲ್ಲುವ ರೀತಿಯಲ್ಲಿ ನಡೆಯುತ್ತಿದೆ. ಪ್ರಾರ್ಥನಾ ಮಂದಿರಗಳು ಕೂಡಾ ಯಾವುದೇ ಇತಿ ಮಿತಿ ಇಲ್ಲದೆ ಸಾಮಾಜಿಕ ಅಂತರ ಪಾಲಿಸದೆ ಜನ ಸಂದಣಿಯನ್ನು ಸೇರಿಸಿಕೊಳ್ಳುತ್ತಿದೆ.
ಮೋಜು-ಆಡಂಬರದ ತಾಣಗಳು ಮತ್ತೆ ತುಳುಕಲಾರಂಭಿಸಿದೆ. ಪಾರ್ಕ್ ಬೀಚ್ ಗಳೂ ಜನರಿಂದ ತುಂಬಲಾರಂಭಿಸುತ್ತಿವೆ. ಮಾಸ್ಕ್ ಧಾರಣೆ ಕಡ್ಡಾಯದ ಘೋಷಣೆ ಕೇವಲ ಮಾರ್ಗಸೂಚಿಯ ಕಡತದಲ್ಲಷ್ಟೆ ಉಳಿದುಕೊಂಡಿದೆ. ಶಿಕ್ಷಣ ಕ್ಷೇತ್ರ ಒಂದಕ್ಕೆ ಮಾತ್ರ ನಿರ್ಬಂಧ ಅಳವಡಿಕೆಯಾಗಿದೆಯೇ ಹೊರತು ಉಳಿದ ಎಲ್ಲಾ ಕ್ಷೇತ್ರಗಳೂ ಸಂಪೂರ್ಣ ಕಾರ್ಯಾರಂಭ ಮಾಡಿವೆ. ಮಸೀದಿ-ಮಂದಿರಗಳಲ್ಲಿ ಧರ್ಮ ಬೋಧಕರು ಅದೆಷ್ಟು ಮುಂಜಾಗ್ರತಾ ಕ್ರಮಗಳ ಬಗ್ಗೆ ಭೋಧನೆ ಮಾಡಿದರೂ ಕನಿಷ್ಠ ಪ್ರಾರ್ಥನಾ ಮಂದಿರಗಳ ಒಳಭಾಗದಲ್ಲೇ ಇದು ಪಾಲನೆಯಾಗದೆ ಗಾಳಿಗೆ ತೂರಲಾಗುತ್ತಿದೆ.
ಸರಕಾರ ಹಾಗೂ ಆಧಿಕಾರಿ ವರ್ಗವಾದರೋ ಇವುಗಳೆಲ್ಲವನ್ನೂ ಕಣ್ಣಾರೆ ಕಂಡರೂ ಕಣ್ಣಿದ್ದೂ ಕುರುಡುತನ ಪಾಲಿಸುತ್ತಿವೆ. ಪರಿಣಾಮ ಕೋವಿಡ್ ಮೂರನೇ ಅಲೆಯನ್ನು ಸರಕಾರ ಸ್ವತಃ ಮೈಮೇಳೆದುಕೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರವಾಗುತ್ತಿದೆ. ಹಿಂದಿನ ಕರಾಳ ಅನುಭವದಿಂದ ಸರಕಾರವಾಗಲೀ, ಇಲಾಖೆಗಳಾಗಲೀ, ಸ್ವತಃ ಜನರಾಗಲೀ ಪಾಠ ಕಲಿತಂತೆ ಕಂಡುಬರುತ್ತಿಲ್ಲ.
ಇನ್ನಾದರೂ ಸರಕಾರ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ಸರಕಾರ ಹೊರಡಿಸಿದ ಮುಂಜಾಗ್ರತಾ ಕ್ರಮಗಳು ಹಾಗೂ ಮಾರ್ಗಸೂಚಿಗಳನ್ನು ಯಥಾವತ್ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕಿದೆ. ತಪ್ಪಿದಲ್ಲಿ ಮತ್ತೆ ಮೂರನೇ ಬಾರಿಗೆ ಸಂಪೂರ್ಣ ನಿಯಂತ್ರಣ ಕ್ರಮ ಕೈಗೊಳ್ಳುವ ಮೂಲಕ ಸಂಕಷ್ಟ ಎದುರಿಸಬೇಕಾದ ದಿನಗಳು ದೂರವಿಲ್ಲ. ರಾಜ್ಯದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೋವಿಡ್ ಸಕ್ರಿಯ ಪ್ರಕರಣಗಳು, ಸಾವಿನ ಸಂಖ್ಯೆಗಳು ಹಾಗೂ ಪಾಸಿಟಿವಿಟಿ ದರಗಳು ಆರೋಗ್ಯ ಇಲಾಖೆಯ ಪ್ರಕಾರ ಬರುತ್ತಿರುವ ಮಾಹಿತಿಗಳೇ ಇದಕ್ಕೆ ಸಾಕ್ಷಿಯಾಗುತ್ತಿದೆ.
0 comments:
Post a Comment